ಮೈತುಂಬಿ ಧುಮ್ಮಿಕ್ಕುತ್ತಿರುವ ಕಾವೇರಿ ನೀರು
ಅಂಬಿಗರು, ವ್ಯಾಪಾರಸ್ಥರಲ್ಲಿ ಸಂತಸ
ಪ್ರಸಿದ್ಧ ಹೊಗೇನಕಲ್ ಫಾಲ್ಸ್ ಗೆ ಜೀವಕಳೆ
ಹನೂರು: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಹೊಗೇನಕಲ್ ಫಾಲ್ಸ್‌ನಲ್ಲಿ ಜೀವಕಳೆ ಮೈದಳೆದಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯದಿಂದ ಹೆಚ್ಚು ನೀರು ನದಿಗೆ ಬಿಟ್ಟಿರುವ ಹಿನ್ನೆಲೆಯಲ್ಲಿ ಹೊಗೇನಕಲ್ ಫಾಲ್ಸ್‌ನಲ್ಲಿ ಹಾಲ್ಗೊರೆಯಂತೆ ನೀರು ಧುಮ್ಮಿಕ್ಕುತ್ತಿದ್ದು, ರಮಣೀಯ ವೈಭವ ಮರುಕಳಿಸಿದೆ.
ಮಲೆ ಮಹದೇಶ್ವರ ಬೆಟ್ಟದಿಂದ ಸುಮಾರು 50 ಕಿಮೀ ದೂರದ ನಯಾಗರ ಜಲಪಾತ ಎಂದೇ ಪ್ರಸಿದ್ದಿ ಪಡೆದಿರುವ ಹೊಗೇನಕಲ್ ಫಾಲ್ಸ್ ಕಾವೇರಿ ವನ್ಯಜೀವಿ ಧಾಮದ ನಡುವೆ ಹಾದು ಹೋಗಿದ್ದು, ಕಾಡುಗಳ್ಳ ವೀರಪ್ಪನ್ ತವರೂರು ಗೋಪಿನಾಥಂ ಹಾಗೂ ತಮಿಳುನಾಡಿನ ಗಡಿ ಜಲಪಾತವಾಗಿದೆ. ಕಾವೇರಿ ಕೊಳ್ಳದಲ್ಲಿ ಮಳೆಯಾಗದ ಪರಿಣಾಮ ಜಲಾಶಯದಿಂದ ನೀರು ಬಿಟ್ಟಿರಲಿಲ್ಲ. ಪರಿಣಾಮ ಕಲ್ಲು ಬಂಡೆಗಳಿಂದ ನಿರ್ಮಿತವಾದ ಹೊಗೇನಕಲ್ ಫಾಲ್ಸ್ ಎರಡು ಮೂರು ತಿಂಗಳಿನಿಂದ ತಳಮಟ್ಟದವರೆಗೂ ಬರಿದಾಗಿತ್ತು. ಈಗ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗು ತ್ತಿರುವುದರಿಂದ ಜಲಾಶಯ ದಿಂದ ನೀರು ನದಿಗೆ ಬಿಡಲಾಗಿದೆ. ಇದರಿಂದ ಹೊಗೇನಕಲ್ ಜಲಪಾತ ಸೊಬಗನ್ನು ಮತ್ತೆ ಪಡೆದು ಕೊಂಡಿದೆ.
ಪ್ರವಾಸಿಗರ ಆಕರ್ಷಣೆ
ಹೊಗೇನಕಲ್ ಫಾಲ್ಸ್‌ನ ಭೋರ್ಗರೆತದ ಸದ್ದು,
ರುದ್ರ ರಮಣಿಯ ದೃಶ್ಯ ಹಾಗೂ ಪ್ರಕೃತಿ ಸೌಂದರ್ಯ ಸವಿಯಲು ಫಾಲ್ಸ್ ಗೆ ವಾರಾಂತ್ಯದ
ದಿನಗಳಲ್ಲಿ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಾರೆ.
ಆದರೆ, ಎರಡು ಮೂರು ತಿಂಗಳಿನಿಂದ ಫಾಲ್ಸ್‌ನಲ್ಲಿ ಧುಮ್ಮಿಕ್ಕುವ ದೃಶ್ಯ ಮಾಯವಾಗಿತ್ತು. ಈ ವೇಳೆ ವೀಕ್ಷಣೆಗಾಗಿ ಆಗಮಿಸಿದ್ದ ಪ್ರವಾಸಿಗರಲ್ಲಿ ನಿರಾಸೆಯಾಗಿತ್ತು. ಈಗ ಫಾಲ್ಸ್ ತನ್ನ ವೈಭವವನ್ನು ಮರಳಿ ಪಡೆದಿದ್ದು, ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.
ಪ್ರವಾಸಿಗರಿಗೆ ಫಾಲ್ಸ್ ವೀಕ್ಷಿಸಲು ತೆಪ್ಪದ ವ್ಯವಸ್ಥೆ ಇದ್ದು, 220 ಕ್ಕೂ ಹೆಚ್ಚು ಅಂಬಿಗರು ಈ ಕಾಯಕ ಮಾಡುತ್ತಿದ್ದಾರೆ. ಇತ್ತ ಕೆಲವರು ಹೋಟೆಲ್ ಹಾಗೂ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. 3 ತಿಂಗಳಿನಿಂದ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕ್ಷೀಣಿಸಿತ್ತು. ವ್ಯಾಪಾರ ವಹಿವಾಟು ಕ್ಷೀಣಗೊಂಡಿತ್ತು. ಈಗ ಫಾಲ್ಸ್ ಮತ್ತೆ ಜೀವಕಳೆ ಪಡೆದಿದ್ದು, ಪ್ರವಾಸಿಗರು ಇತ್ತ ಮುಖ ಮಾಡಿದ್ದಾರೆ. ಇದರಿಂದ ಅಂಬಿಗರು ಹಾಗೂ ವ್ಯಾಪಾರಸ್ಥರಲ್ಲಿ ಕೊಂಚ ನಿಟ್ಟುಸಿರು ಬಿಟ್ಟಂತಾಗಿದೆ.
ವರದಿ ನೂರುಲ್ಲಾ ಕೌದಳ್ಳಿ
ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್‌ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್‌ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.