ನೀರಿನ ಸಮಸ್ಯೆ ಬಗೆಹರಿಸಲು ತುರ್ತು ಕ್ರಮಕೈಗೊಳ್ಳಿ - ಅಧಿಕಾರಿಗಳಿಗೆ ಶಾಸಕರಾದ ಶ್ರೀ ಎಂ.ಆರ್.ಮಂಜುನಾಥ್ ರವರು ಸೂಚನೆ ನೀಡಿದರು.

 ಮುಂದಿನ 6 ತಿಂಗಳು ಪರ್ಯಾಯ ವ್ಯವಸ್ಥೆ ಮಾಡಿ - ಖಾಸಗಿ ಬೋರ್‌ಗಳಿಂದ ನೀರು ಖರೀದಿಗೆ ಆದೇಶ

ಹನೂರು: ನೀರಿನ ಸಮಸ್ಯೆ ಕುರಿತು ಶಾಸಕ ಎಂ.ಆರ್. ಮಂಜುನಾಥ್ ರವರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಟಾಸ್ಕ್ ಫೋರ್ಸ್ ಸಭೆಯು ಪಟ್ಟಣದ ಲೋಕೋಪಯೋಗಿ ಇಲಾಖೆ ವಸತಿ ಗೃಹದಲ್ಲಿ ಜರುಗಿತು.

ಈ ವೇಳೆ ಮಾತನಾಡಿದ ಶಾಸಕ ಎಂ.ಆರ್. ಮಂಜುನಾಥ್, ಹನೂರು ಕ್ಷೇತ್ರ ವ್ಯಾಪ್ತಿಯಲ್ಲಿ ನೀರಿನ ಅಭಾವ ಎದುರಾಗಿರುವ ಗ್ರಾಮಗಳ ಜನರಿಗೆ ಅನುಕೂಲವಾಗುವಂತೆ ತುರ್ತು ಕ್ರಮ ಕೈಗೊಳ್ಳಬೇಕು. ಇದೀಗ ಮಳೆ ಅಭಾವದ ಹಿನ್ನೆಲೆಯಲ್ಲಿ ನೀರಿನ ಕೊರತೆ ಇದೆ. ಮಳೆ ಬಂದ ಬಳಿಕ ಹಾಗೂ ಜೆ.ಜೆ.ಎಂ. ಯೋಜನೆಯ ಕಾಮಗಾರಿ ಪೂರ್ಣಗೊಂಡ ಬಳಿಕ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ. ಹೀಗಾಗಿ ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಸೂಚನೆ ನೀಡಿದರು.

ಆಯಾ ಗ್ರಾಮ ಪಂಚಾಯಿತಿ ಪಿ.ಡಿ.ಒ.ಗಳ ಬಳಿ ನೀರಿನ ಸಮಸ್ಯೆ ಇರುವ ಗ್ರಾಮಗಳ ಬಗ್ಗೆ ಮಾಹಿತಿ ಪಡೆದ ಶಾಸಕರು, ಜನರಿಗೆ ಪರ್ಯಾಯವಾಗಿ ನೀರಿನ ವ್ಯವಸ್ಥೆ ಮಾಡಬೇಕು. ಇದಕ್ಕಾಗಿ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಮುಂದಿನ 5ರಿಂದ 6 ತಿಂಗಳ ಮಟ್ಟಿಗೆ ನೀರಿನ ಸಮಸ್ಯೆ ಇರಲಿದೆ. ಬಳಿಕ ಎಲ್ಲವೂ ಸರಿಯಾಗುತ್ತದೆ. ಗ್ರಾಮದ ಮಟ್ಟದಲ್ಲಿ ಸ್ಥಳೀಯರ ಸಮ್ಮುಖದಲ್ಲಿ ಸಭೆ ನಡೆಸಿ ಮಾಹಿತಿ ಪಡೆದು ಸಮಸ್ಯೆ ಬಗೆಹರಿಸಬೇಕು ಎಂದರು. 

ದನ ಕರುಗಳಿಗೆ ನೀರು ಮತ್ತು ಮೇವು ತೊಂದರೆಯಾಗದಂತೆ ನೋಡಿಕೊಳ್ಳಬೇಕು. ನಾಗಣ್ಣನಗರದಲ್ಲಿ ಇಟ್ಟಿಗೆ ಗೂಡು ಕಾರ್ಯಚಟುವಟಿಕೆ ನಡೆಯುತ್ತಿದ್ದು, ರಾತ್ರಿ ವೇಳೆ ನೀರು ಸರಬರಾಜು ಆಗುತ್ತಿದೆ. ನೀರನ್ನು ದುರ್ಬಳಕೆ ಮಾಡಿಕೊಳ್ಳುವವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. 

ಹುತ್ತೂರು, ರಾಮಪುರ, ಕೌದಲ್ಲಿ, ಅಜ್ಜೀಪುರ ಗ್ರಾಮಗಳ ಖಾಸಗಿ ಬೋರ್‌ಗಳಿಂದ ಹಣ ಕೊಟ್ಟು ನೀರು ಖರೀದಿಸಬೇಕು ಎಂದೂ ಅವರು ಹೇಳಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಚೈತ್ರಾ, ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ರವೀಂದ್ರ, ಮುಖ್ಯಾಧಿಕಾರಿ ರೇಖಾ, ಚೆಸ್ಕಾಂ ಎ.ಇ.ಇ. ರಂಗಸ್ವಾಮಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಂಗಸ್ವಾಮಿ, ಜೆ.ಜೆ.ಎಂ. ಪೂರ್ಣಿಮಾ, ಸಿಡಿಪಿಓ ಅಂಬಿಕಾ, ತೋಟಗಾರಿಕೆ ಇಲಾಖೆ ಅನಿತಾ ಸೇರಿದಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಹಾಗೂ ಇನ್ನಿತರರು ಹಾಜರಿದ್ದರು.
ವರದಿ ನೂರುಲ್ಲಾ ಕೌದಳ್ಳಿ

ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್‌ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್‌ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.