ಕೊಳ್ಳೇಗಾಲ: ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಶ್ರೀ ಶಿವಶರಣ ಹಡಪದ ಅಪ್ಪಣ್ಣ ಅವರ 892ನೇ ಜಯಂತಿ ಸಮಾರಂಭವನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮವನ್ನು ಶಾಸಕ ಎ.ಆರ್. ಕೃಷ್ಣಮೂರ್ತಿ ಅವರು ಉದ್ಘಾಟಿಸಿ, ಹಡಪದ ಅಪ್ಪಣ್ಣ ಅವರ ಜೀವನ, ಆದರ್ಶಗಳು ಹಾಗೂ ಸಮಾಜಕ್ಕೆ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸಿದರು.
12ನೇ ಶತಮಾನದ ಶರಣ ಪರಂಪರೆಯಲ್ಲಿ ಶಿವಶರಣ ಹಡಪದ ಅಪ್ಪಣ್ಣ ಅವರು ವಿಶಿಷ್ಟ ಸ್ಥಾನ ಪಡೆದಿದ್ದಾರೆ. ಅವರು ತಮ್ಮ ಸರಳ ಜೀವನ, ಕಾಯಕ ನಿಷ್ಠೆ ಹಾಗೂ ಸಾಮಾಜಿಕ ಸಮಾನತೆಯ ಸಂದೇಶದ ಮೂಲಕ ಸಮಾಜಕ್ಕೆ ಮಹತ್ವದ ಮಾರ್ಗದರ್ಶನ ನೀಡಿದ್ದಾರೆ ಎಂದು ಹೇಳಿದರು.
ಶರಣರ ತತ್ವಗಳು ಇಂದಿನ ಸಮಾಜಕ್ಕೂ ಪ್ರಸ್ತುತವಾಗಿದ್ದು, ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ಸಾಮರಸ್ಯ, ಸಹಬಾಳ್ವೆ ಹಾಗೂ ಸಮಾನತೆಯನ್ನು ಬೆಳೆಸುವಲ್ಲಿ ಶರಣರ ಚಿಂತನೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಸಾಹಿತಿ ಹಿಂದ್ವಾಡಿ ಶಿವಣ್ಣ ಅವರು ಹಡಪದ ಅಪ್ಪಣ್ಣ ಅವರ ಜೀವನ ಚರಿತ್ರೆ ಕುರಿತು ಉಪನ್ಯಾಸ ನೀಡಿದರು. ಹಡಪದ ಅಪ್ಪಣ್ಣ ಅವರು ಬಸವಣ್ಣನವರ ಸಮಕಾಲೀನ ಶರಣರಾಗಿದ್ದು, ಕಾಯಕ ಮತ್ತು ದಾಸೋಹದ ತತ್ವಗಳನ್ನು ಪಾಲಿಸಿ ಜನರಲ್ಲಿ ಜಾಗೃತಿ ಮೂಡಿಸಿದ ಮಹಾನ್ ವ್ಯಕ್ತಿ ಎಂದು ಹೇಳಿದರು.
ಶರಣರ ವಚನ ಸಾಹಿತ್ಯ, ಅವರ ಸಾಮಾಜಿಕ ಚಿಂತನೆಗಳು ಹಾಗೂ ಮಾನವೀಯ ಮೌಲ್ಯಗಳ ಕುರಿತು ವಿವರಿಸಿದ ಅವರು, ಇಂದಿನ ಯುವ ಪೀಳಿಗೆ ಶರಣರ ಆದರ್ಶಗಳನ್ನು ಅರಿತುಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಾಜೇಂದ್ರ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಸವಿತಾ ಸಮಾಜದ ಅಧ್ಯಕ್ಷ ತಮ್ಮಯ್ಯ, ಸವಿತಾ ಸಮಾಜ ಮಹಿಳಾ ಸಂಘ ಅಧ್ಯಕ್ಷೆ ದೊಡ್ಡತಾಯಮ್ಮ ಸೇರಿದಂತೆ ಮುಖಂಡರು ಇತರರು ಇದ್ದರು.
ವರದಿ ನಿಂಪು ರಾಜೇಶ್
ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.