ಕೊಳ್ಳೇಗಾಲ. ಪಟ್ಟಣದ ಕನಕ ಸಮುದಾಯ ಭವನದಲ್ಲಿ ಭಾನುವಾರ ಕುವೆಂಪು ಮಂತ್ರ ಮಾಂಗಲ್ಯ ವಿಧಾನದಲ್ಲಿ ಮದುವೆ ಕಾರ್ಯ ನೆರವೇರಿತು.

ಯಳಂದೂರು ತಾಲ್ಲೂಕು ಗಣಿಗನೂರು ಗ್ರಾಮದ ಬೆಂಗಳೂರು ಕಂಪನಿಯೊಂದರ ಉದ್ಯೋಗಿ ಸೋಮಶೇಖರ್.ಎನ್ ಮತ್ತು ಶ್ರೀರಂಗಪಟ್ಟಣ ತಾಲ್ಲೂಕಿನ ಪಿ.ಹೊಸಹಳ್ಳಿ ಪಂಚಾಯತ್ ಗ್ರಂಥಾಲಯ ಇಲಾಖೆ ಉದ್ಯೋಗಿ ಶಿಲ್ಪಾ.ಹೆಚ್.ಬಿ, ಅವರು ಕುವೆಂಪು ಮಂತ್ರ ಮಾಂಗಲ್ಯ ವಿಧಾನದಂತೆ ಮದುವೆಯಾದರು.

ಜಿಲ್ಲೆಯ ಹಿರಿಯ ಸಾಹಿತಿ ಶಂಕನಪುರ ಮಹದೇವ ರವರು ವಧುವರರಿಗೆ ಮಂತ್ರಮಾಂಗಲ್ಯದ ಪ್ರಮಾಣವಚನ ಮತ್ತು ವಿವಾಹ ಸಂಹಿತೆಯನ್ನು ಬೋಧಿಸಿದರು. ಅದಕ್ಕೂ ಮೊದಲು ಭಾರತದ ಸಂವಿಧಾನದ ಪೀಠಿಕೆಯನ್ನು ವಧು ವರರ ಸಮೇತ ನೇರೆದಿದ್ದ ಎಲ್ಲರಿಗೂ ಬೋಧಿಸಿದರು.
ಕುವೆಂಪು ವಿವಾಹ ಸಂಹಿತೆ 20 ಅಂಶಗಳನ್ನು ವಧು ವರರು ಅನುಸರಿಸಬೇಕೆಂದು ತಿಳಿಸಿದರು.

ಶಾಸ್ತ್ರ, ಪುರೋಹಿತ, ಗಂಟೆ ಘಳಿಕೆ ಮತ್ತು ಮುಹೂರ್ತ ಗಳನ್ನು ಲೆಕ್ಕಿಸದೇ ವೈಚಾರಿಕವಾದ ಕುವೆಂಪು ಮಂತ್ರ ಮಾಂಗಲ್ಯ ವಿಧಾನದಲ್ಲಿ ಮದುವೆ ನೆರವೇರಿತು.

ಕುವೆಂಪು ರವರು ರೂಪಿಸಿರುವ ಮಂತ್ರ ಮಾಂಗಲ್ಯ ವಿವಾಹ ಸಂಹಿತೆ ಜಾತಿ, ಮತ, ಧರ್ಮ, ಸಂಪ್ರದಾಯ ಮೂಢನಂಬಿಕೆಗಳನ್ನು ಮೀರಿ ಸಂವಿಧಾನದ ಪೀಠಿಕೆಯ ಆಶಾಯಗಳನ್ನೇ ಬೋಧಿಸುತ್ತದೆ.

ಬುದ್ಧ, ಬಸವ, ಅಂಬೇಡ್ಕರ್ ಮತ್ತು ಕುವೆಂಪು ರವರ ವಿಚಾರಗಳು ಈ ವಿವಾಹ ಸಂಹಿತೆಯಲ್ಲಿ ಅಡಕವಾಗಿವೆ ಎಂದರು.

ಇಂದಿನ ದುಬಾರಿ ವೆಚ್ಚದ ಮದುವೆಗಳು ಮತ್ತು ಆಡಂಬರದ ಅರ್ಥವಿಲ್ಲದ ಸಂಪ್ರದಾಯಗಳನ್ನು ಹೊರತು ಪಡಿಸಿ ಇಂತಹ ಮದುವೆಗಳು ಹೆಚ್ಚಾಗಿ ನಡೆಯಬೇಕೆಂದು ಮಹದೇವ ಶಂಕನಪುರ ಅವರು ತಿಳಿಸಿದರು.

ಮಾಂಗಲ್ಯ, ಅಕ್ಷತೆ, ಹೂವಿನ ದಳಗಳು ಇಷ್ಟೇ ಮದುವೆಯಲ್ಲಿ ಕಂಡು ಬಂದದ್ದು. ಹಿರಿಯರು ಮತ್ತು ಬಂಧುಮಿತ್ರರ ಹಾರೈಕೆಯಂತೆ ಕೆಲವೇ ಸಮಯದಲ್ಲಿ ಮದುವೆ ಅರ್ಥಪೂರ್ಣವಾಗಿ ನೆರವೇರಿತು.

ಈ ವಿವಾಹ ಕಾರ್ಯದಲ್ಲಿ ವಧು ವರರ ಕುಟುಂಬಸ್ಥರು, ಗಣಿಗನೂರು ಗ್ರಾಮ ಮತ್ತು ಪಿ.ಹೊಸಹಳ್ಳಿ ಗ್ರಾಮದ ಯಜಮಾನರು, ಸಾಹಿತಿ ಸುಂದರ್ ಕಲಿವೀರ, ವರನ ಸಹೋದರ ಚೇತನ್, ಯಜಮಾನ ರಘು, ಬಂಧುಮಿತ್ರರು ಹಾಜರಿದ್ದರು.

ಇದು ಕೊಳ್ಳೇಗಾಲ ಪರಿಸರದಲ್ಲಿ ಕುವೆಂಪು ಮಂತ್ರ ಮಾಂಗಲ್ಯ ವಿಧಾನ ಪ್ರಕಾರ ನಡೆದ ಮೊದಲ ಮದುವೆಯಾಗಿದ್ದು ಬಂದಿದ್ದ ವಧು ವರರ ಸಂಬಂಧಿಗಳು ಈ ಮಾದರಿಯಲ್ಲಿ ತಾವು ಮುಂದಿನ ದಿನಗಳಲ್ಲಿ ತಮ್ಮ ಮಕ್ಕಳಿಗೂ ಈ ರೀತಿ ಸರಳ ಮದುವೆ ಮಾಡುವ ಅಶಯ ವ್ಯಕ್ತಪಡಿಸಿದರು. ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು.

  • ನಿಂಪುವಾರ್ತೆ

ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್‌ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್‌ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.